Thursday, May 14, 2015

ಮತ್ತೆ ಹೊಳೆದವು ಕಂಗಳು

ಮತ್ತೆ  ಹೊಳೆದವು ಈ ಕಂಗಳು
ನಿನ್ನ ನೋಡೋ ತವಕದಿ
ಸುತ್ತ ಬಿಡಿಸ್ಯಾವೋ ರಂಗೋಲಿ
ನನ್ನ ಕಾಲ ಬೆರಳ ತುದಿ ।।

ಮುಗಿ ಮುಗಿ ಬಿದ್ದಾವೋ ರಾಶಿ ಕನಸುಗಳು
ಹೃದಯದ ಗೂಡಿನ ಅಂಗಳದಿ
ಮಿರಿ ಮಿರಿ ಮಿಂಚವೊ ನನ್ನ ಕೆನ್ನೆಗಳು
ನಿನ್ನ ನೆನೆವ ಆತುರದಿ ।।

ಆಸೆಗಳ ತಿಳಿಗೊಳದಿ ಕಲ್ಲೆಸೆದು ಗೆಳೆಯ
ರಾಡಿ ಮಾಡಿ ಹೋದೆಯಲ್ಲೋ
ಬಯಕೆಗಳು ಮುನ್ನುಗ್ಗಿ ಮತ್ತೊಮ್ಮೆ ಗೆಳೆಯ
ಮೂಡಿ ಮೂಡಿ ಬಂದೈತಲ್ಲೊ ।।

ಜೇನಂತ ಮಾತುಗಳು ದನಿಯಾಗಿ ಎದೆಯ
ಒಳಗೇ ಅವಿತು ಕುಳಿತಿಹುದು
ಏನಂತ ಹೇಳಲಿ ನನ ಮನದ ಇನಿಯ
ಇಳೆಯೇ ಸ್ವರ್ಗವೆನಿಸುವುದು ।।





Wednesday, April 25, 2012

ಬಾಲೆ ನೀನ್ಯಾರು?

ನನ್ನೆದೆಯ ಗುಡಿಯಲ್ಲಿ
ಕಟ್ಟಿರುವ ಮನೆಯಲ್ಲಿ
ಬೆಚ್ಚನೆ ಕುಳಿತಿರುವ ಬಾಲೆ ನೀನ್ಯಾರು?

ಆಸೆಗಳು ಒಡಲಲ್ಲಿ ಕುಡುಗೋಲ ಕುಟ್ಟಿಹುದು
ಕಡೆವ ಮನಸಿನಲಿ ಬಯಲಾಟವಾಡಿಹುದು
ಮಿಡಿವ ಭಾವಗಳ ಅತ್ತಿತ್ತ ನೂಕುತಲಿ
ಬೆಚ್ಚನೆ ಕುಳಿತಿರುವ ಬಾಲೆ ನೀನ್ಯಾರು?

ಒಳಗೊಳಗೆ ಕೊರಗುತ್ತ ಕಳವಳದಿ ನೋಡಿದೆನು
ಕೈಗೆಟುಕದಂತೆ ನಿಂತಿರಲು ನೀ
ಒಳಗಿರುವ ಕಲರವದ ಕೂಗು ಕೇಳಿದರೂ
ಬೆಚ್ಚನೆ ಕುಳಿತಿರುವ ಬಾಲೆ ನೀನ್ಯಾರು?

                       - ಮೇಘನಾ

Tuesday, April 24, 2012

ನನ್ನ ಕಣ್ಣೀರಲ್ಲೇ ಬರೆದಿರುವೆ ಈ ಓಲೆಯಾ
ದಯಮಾಡಿ ಹರಿಯದಿರು ಇದ ನೀ ಗೆಳೆಯಾ
ನಿನಗಾಗಿ ಮರುಗಿ ಮಲಗಿದೆ ಹೃದಯಾ
ಕೇಳಲಾರೆಯಾ ನೀ ಮನದಾ ಕರೆಯಾ||

ನಿದ್ದೆಯಲೂ ಕಾಡುತಿದೆ ನಿನ್ನದೇ ಕನಸುಗಳು
ಬೆರಳುಗಳ ಬೆಸೆಯುತಿದೆ ಪ್ರೀತಿಯಾ ಭಾವಗಳು
ಗುದ್ದಾಡಿ ಓಡಿಸವು ಅದ ಹೃದಯದಾ ಆಸೆಗಳು
ಪೆದ್ದಾಗಿ ಮಲಗಿರುವೆ ದುಃಖದಾ ಎದುರು||

ಮನದೊಡನೆ ಮಾತನಾಡುತಿದೆ ನಿನ್ನ ಉಸಿರು
ಬಚ್ಚಿಡಲಾರದೆ ನೀ ಸುಳಿದಾ ಗುರುತು,
ಬಿಚ್ಚಿಡು ಮೌನವೇಕೇ ಇನ್ನು ನನ್ನಾ ಎದುರು






Friday, April 20, 2012

ಓ ಜನನೀ....


ಜಗದೊಳಗೆ ನನ್ನ ದೂಡಿರುವ ದೇವತೇ ನೀನು
ನಿನ್ನೊಳಗೇ ನನ್ನ ಸೃಷ್ಟಿಸಿ ಪೋಷಿಸಿದೇ ನೀನು
ನೀನೇನಾ ಈ ಜಗಕೇ ಕಾರಣ
ನೀನೇನಾ ಈ ಜಗದಾ ಚೇತನಾ||

ನರನಾಡಿ ನೆತ್ತರುಗಳನೇ
ನನಗೇ ಉಣಿಸಿದೆ
ನಿನ್ನ ಹೃದಯದ ಬಡಿತದಲೇ
ನನ್ನ ಹೃದಯವ ಚಿತ್ರಿಸಿದೆ
ನೀನೇನಾ ಈ ಜಗಕೇ ಕಾರಣ
ನೀನೇನಾ ಈ ಜಗದಾ ಚೇತನಾ||

ಕೈ ಹಿಡಿದು ನೀ ಮುನ್ನಡೆದು
ಭುವಿ ಒಡಲಾ ಸ್ಪರ್ಷಿಸಿದೆ
ಕಣ್ತೆರೆಸಿ ನನ್ನ ತಬ್ಬಿಡಿದು
ರವಿ ಕಿರಣಗಳ ಸೋಕಿಸಿದೆ
ನೀನೇನಾ ಈ ಜಗಕೇ ಕಾರಣ
ನೀನೇನಾ ಈ ಜಗದಾ ಚೇತನಾ||

                

Tuesday, April 17, 2012

ಅಪಾರ...


ಇರುವೆ ಚಿಕ್ಕ ಜೀವಿಯಾದರೂ
ಕಡಿದಾಗ ಆಗುವ ಉರಿ ಅಪಾರ
ಹಾಗೆಯೇ ಕಷ್ಟಗಳೂ, ಬರುವಾಗ
ಅಲ್ಪ ಪ್ರಮಾಣದಲ್ಲಿದ್ದರೂ,
ಕೊಡುವ ಯಾತನೆ ಅಪಾರ..

ನೆನಪು..


ಕಹಿ ನೆನಪುಗಳು ಎಂಬ ಕಸವ
ಗುಡಿಸಿ ಬುಟ್ಟಿಗೆಸೆದೆ,
ಏನಾದರೂ ಬೆಂಬಿಡೆನು ಎಂಬ
ಛಲ ತೊಟ್ಟ ನೆನಪು,
ದಾರಿಯ ಅಂಚಿನಲಿ ಕೊಟ್ಟ ಬೆಂಕಿಯ
ಕೈಗೆ ಸಿಕ್ಕಿ, ಉರಿದು, ಹೊಗೆಯಾಗಿ
ಮತ್ತೆ ನನ್ನನ್ನೇ ಆವರಿಸಿತು...

Saturday, April 7, 2012

ಸುಖ..


ಆ ಬ್ರಹ್ಮ ನನ್ನನ್ನು
ನಿನ್ನ ಕಣ್ಣ
ಹನಿಯನ್ನಾಗಿಯಾದರೂ
ಹುಟ್ಟಿಸಬಾರದಿತ್ತಾ ಗೆಳೆಯssss
ನಿನ್ನ ಮಡಿಲಿಗೆ ಬಿದ್ದಾಗ
ಸಾಯುವುದೂ
ಎಷ್ಟು ಸುಖ ಎನಿಸುತಿತ್ತು...